ತಾರಾಚಂದ್
1888-1973. ಖ್ಯಾತ ಇತಿಹಾಸಕಾರ, ಇವರು ಜನಿಸಿದ್ದು ಈತ ಪಾಕಿಸ್ತಾನದಲ್ಲಿರುವ ಸಿಯಾಲ್ ಕೋಟಿನಲ್ಲಿ, 1888ರ ಜೂನ್ 17ರಂದು ಅಲಹಾಬಾದ್ ವಿಶ್ವವಿದ್ಯಾಲಯದಿಂದ ಎಂ. ಎ. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ (ಡಿ.ಫಿಲ್.) ಪದವಿಗಳನ್ನು ಪಡೆದು ಅಲಹಾಬಾದಿನ ಕಾಯಸ್ಥ ಪಾಠಶಾಲಾ ಯೂನಿವರ್ಸಿಟಿ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿದ್ದು ಅನಂತರ ಅದೇ ಕಾಲೇಜಿನ ಪ್ರಿನ್ಸಿಪಾಲರಾದರು (1925-45). ಸ್ವಲ್ಪ ಕಾಲ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದು (1946-47) ಅನಂತರ ಅದರ ಕುಲಪತಿಗಳೂ ಆದರು (1947-48). 1948-51 ರ ಅವಧಿಯಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದಲ್ಲಿ ಕಾರ್ಯದರ್ಶಿ ಮತ್ತು ಶೈಕ್ಷಣಿಕ ಸಲಹೆಗಾರ ಆಗಿದ್ದರು. ಅನಂತರ ಇರಾನಿನಲ್ಲಿ ಭಾರತದ ರಾಯಭಾರಿಯಾಗಿ ಕೆಲಸ ಮಾಡಿದರು (1951-56) . ಕೆಲಕಾಲ ಭಾರತೀಯ ಇತಿಹಾಸ ಸಭೆಯ ಅಧ್ಯಕ್ಷರಾಗಿಯೂ ಇದ್ದರು. ಟೇಹರಾನ್, ಉಸ್ಮಾನಿಯ ಮತ್ತು ಅಲಿಫರ್ ವಿಶ್ವವಿದ್ಯಾಲಯಗಳು ಅವರನ್ನು ಗೌರವ ಇತಿಹಾಸ ಪ್ರಾಧ್ಯಾಪಕರನ್ನಾಗಿ ನೇಮಿಸಿಕೊಂಡುವು. ದೆಹಲಿ, ಸಾಗರ್ ಮತ್ತು ಅಲಿಘರ್ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಅವರನ್ನು ಗೌರವಿಸಿದುವು. ಅವರು ಹತ್ತು ವರ್ಷಗಳ ಕಾಲ (1958-68) ರಾಜ್ಯ ಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಭಾರತ ಸಕಾರ ಯೋಜಿಸಿದ ಭಾರತ ಸ್ವಾತಂತ್ರ್ಯ ಚಳವಳಿಯ ಇತಿಹಾಸ ರಚನಾ ಘಟಕದ ಅಧ್ಯಕ್ಷರಾದರು. 1973ರ ಅಕ್ಟೋಬರಿನಲ್ಲಿ ತಾರಾಚಂದರು ನಿಧನರಾದರು.

ತಾರಾಚಂದರು ಆಧುನಿಕ ಭಾರತದ ಒಬ್ಬ ಶ್ರೇಷ್ಠ ಲೇಖಕ. ಇಂಗ್ಲಿಷ್ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಇತಿಹಾಸ, ರಾಜ್ಯಶಾಸ್ತ್ರ ಮತ್ತು ತತ್ತ್ವಶಾಸ್ತ್ರ ಕುರಿತು ಉತ್ತಮ ಕೃತಿಗಳನ್ನು ರಚಿಸಿದ್ದಾರೆ. ಅವರ ಪ್ರೌಢ ಲೇಖನಗಳು ದೇಶ ವಿದೇಶಗಳ ಪತ್ರಿಕೆಗಳಲ್ಲಿ ಪ್ರಕಟವಾಗಿ ಮನ್ನಣೆ ಪಡೆದಿವೆ. ಎ ಷಾರ್ಟ್ ಹಿಸ್ಟೊರಿ ಆಫ್ ದಿ ಇಂಡಿಯನ್ ಪೀಪ್‍ಲ್, ಇನ್‍ಫ್ಲುಯೆನ್ಸ್ ಆಫ್ ಇಸ್ಲಾಮ್ ಆನ್ ಇಂಡಿಯನ್ ಕಲ್ಚರ್, ಗ್ರೋತ್ ಆಫ್ ಇಸ್ಲಾಮಿಕ್ ಥಾಟ್ ಇನ್ ಇಂಡಿಯ, ಹಿಸ್ಟೊರಿ ಆಫ್ ಈಸ್ಟರ್ನ್ ಅಂಡ್ ವೆಸ್ಟರ್ನ್ ಫಿಲಾಸಫಿ, ಹಿಸ್ಟೊರಿ ಆಫ್ ಫ್ರೀಡಮ್ ಮೂವ್‍ಮೆಂಟ್ ಇನ್ ಇಂಡಿ (ಸಂ, 1 ಮತ್ತು 2 ). ಸ್ಟೇಟ್ ಆಂಡ್ ಸೊಸೈಟಿ ಇನ್ ದಿ ಮೊಗಲ್ ಪೀರಿಯಡ್, ದಾರಾ ಷಿಕೋಸ್ ಸರ್-ಇ-ಅಕ್ಬರಿ) (ಪರ್ಷಿಯನ್) - ಇವು ತಾರಾಚಂದರು ರಚಿಸಿದ ಪುಸ್ತಕಗಳಲ್ಲಿ ಕೆಲವು. ಭಾರತ ಸ್ವಾತಂತ್ರ್ಯ ಚಳವಳಿಯ ಬಗ್ಗೆ ರಚಿಸಿದ ಇವರ ಎರಡು ಸಂಪುಟಗಳು ತುಂಬ ಪ್ರಸಿದ್ಧವಾಗಿವೆ. ಹಾಗೆಯೇ ಮೊಗಲ್ ಅವಧಿ ಮತ್ತು ಇಸ್ಲಾಮಿಗೆ ಸಂಬಂಧಿಸಿದ ಇವರ ಗ್ರಂಥಗಳು ಇತಿಹಾಸದ ವಿದ್ಯಾರ್ಥಿಗಳಿಗೆ ಆಕರ ಗ್ರಂಥಗಳಾಗಿವೆ.					(ಕೆ.ವಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ